' ಕೆಂಡ ಸಂಪಿಗೆ ' - ಬೆಸ್ಟ್ ಅಂಡ್ ವರ್ಸ್ಟ್ ಸಂಗತಿಗಳಿಗಾಗಿ ಒಂದು ಅಂಕಣ
'ಧಾರೇಶ್ವರರು ಹಾಡಿದರೆಂದರೆ ಕಲಿಯುಗ ದ್ವಾಪರವಾಗುವುದೆ...?!'
ಸದಭಿರುಚಿಯ ಕೆಲಸಗಳಿಗೆ 'ಜನ ಬರಲ್ಲ, ನೋಡಲ್ಲ, ಓದಲ್ಲ ಇತ್ಯಾದಿ'- ಕಾರಣಗಳನ್ನಿಟ್ಟುಕೊಂಡು ಕೀಳುದರ್ಜೆಯದ್ದನ್ನು ಮಾಡಿದಂತೆಯೇ, 'ಜನ ಬರ್ತಾರೆ, ನೋಡ್ತಾರೆ, ಓದ್ತಾರೆ' ಅಂತಲೂ ಬೇಕಾಬಿಟ್ಟಿಯಾಗಿ ಕೆಲವರು ವರ್ತಿಸುತ್ತಿರುತ್ತಾರೆ !
ಪೆರ್ಡೂರು ಮೇಳದ 'ಗಾಯಕ' ಧಾರೇಶ್ವರರ ಗಾಯನವನ್ನು ಕೇಳುವ ಅವಕಾಶ ಇತ್ತೀಚೆಗೆ ಬೆಂಗಳೂರಿನ ಟೌನ್ಹಾಲ್ನಲ್ಲಿ ನನ್ನ ಪಾಲಿಗೆ ಅಟ್ಟಿಸಿಕೊಂಡು ಬಂತು. ಉತ್ತರನ ಪೌರುಷ-ಲಂಕಾ ದಹನ-ಶ್ರೀಕೃಷ್ಣ ಗಾರುಡಿ ಪ್ರಸಂಗಗಳು. ರಮೇಶ್ ಬೇಗಾರ್ ಸಂಯೋಜನೆ. ಪೌರಾಣಿಕ ಹಿನ್ನೆಲೆಯ ಪ್ರಸಂಗಗಳು ಅನ್ನುವುದನ್ನು ಬಿಟ್ಟರೆ ಪ್ರದರ್ಶನದಲ್ಲಿ ಒಂಚೂರೂ ಪೌರಾಣಿಕ ಕಳೆ ಕಾಣದ್ದು ನಮ್ಮ ಕಣ್ಣಿನ ದೋಷವೇ ಇರಬೇಕು ! ಮೊದಲಬಾರಿಗೆ ಉತ್ತರನ ಪಾತ್ರ ವಹಿಸಿದ ಹಾಸ್ಯ ಕಲಾವಿದ ರಮೇಶ್ ಭಂಡಾರಿ, ಭಂಡು ಮಾತುಗಳನ್ನು ಇನ್ನಷ್ಟು ಕಲಿಯಬೇಕು. 'ನಮ್ಮ ಮಾವ ಕೀಚಕ ಸತ್ತದ್ದು ಯಾಕೆ ? ಅಳಿಯ ತಯಾರಾಗಿದ್ದಾನೆ ಅಂತ..!' ಎಂಬ ಒಂದು ಮಾತು ಫಸ್ಟ್ಕ್ಲಾಸ್. ಕಣ್ಣಿಮನೆಯ ಶೃಂಗಾರ ರಾವಣ, ಥಂಡಿಮನೆಯ ಹನುಮಂತನೂ ಅಷ್ಟಕ್ಕಷ್ಟೆ. ರಂಗಗೀತೆ, ಭಜನೆ, ಸುಗಮ ಸಂಗೀತದ ಶೈಲಿಯನ್ನು ಕಲಕಿಕೊಂಡು ಹಾಡುವ ಧಾರೇಶ್ವರರ ಬಗ್ಗೆ ಮಾತ್ರ ಯಕ್ಷಗಾನ ಪ್ರಿಯರು ಇನ್ನೂ ಚಪ್ಪಾಳೆ ತಟ್ಟಿ ಧಾರಾಳತನ ತೋರುತ್ತಿರುವುದು ವಿಚಿತ್ರ. ಯಾವುದೇ ಕಲೆಯ ಶ್ರೇಷ್ಠತೆ ಅಡಗಿರುವುದು ತನ್ನ ಅನನ್ಯತೆಯನ್ನು ತೋರಿಸಿಕೊಳ್ಳುವುದರಲ್ಲಿಯೇ ಹೊರತು ಇನ್ನೊಂದನ್ನು ನಕಲು ಮಾಡುವುದರಲ್ಲಲ್ಲ. ಪ್ರಯೋಗ ಮಾಡುವುದೇ ಉದ್ದೇಶವಾಗಿದ್ದರೆ 'ಯಕ್ಷಗಾನ' ಎಂಬ ಬ್ಯಾನರ್ ತೆಗೆದು, ಹೊಸ ಫಲಕದಡಿ ಈ ಮಿಶ್ರಗಾಯನ ಪ್ರಯೋಗಗಳನ್ನು ಮುಂದುವರಿಸಬಹುದು ಎಂಬುದು ನಮ್ಮ ಸೂಚನೆ. ಸುರೇಶ್ ಶೆಟ್ಟಿಯವರಾದರೆ ಭಾಗವತಿಕೆ ಮಾಡಲು ಯತ್ನಿಸುತ್ತಿದ್ದಾರೆ ಅನ್ನಬಹುದು.
ಕೊನೆಗೆ ಸಂಘಟಕರು ಘೋಷಿಸಿದ್ದು: 'ಮುಂದಿನ ವಾರ ಯುವ ಗಾಯಕನೊಬ್ಬನ (ಹೆಸರು ಮರೆತೆ) ಸುಗಮಸಂಗೀತ ಹಾಗೂ ಯಕ್ಷಗಾನ ಶೈಲಿಯಲ್ಲಿ ಧಾರೇಶ್ವರರ ಹಾಡುಗಾರಿಕೆಯ ಜುಗಲ್ಬಂದಿ ಏರ್ಪಡಿಸಲಾಗಿದೆ !' ಧಾರೇಶ್ವರರ ಧಾರಾಕಾರ ಸ್ವರಧಾರೆಗೆ ಕಿವಿಗೊಡುವವರಿಗೆ ಶರಣು !
----------------------------------------------------------------------------
ಪ್ರಸನ್ನರ ಸರಳ ಪಾಠ
ಸುಮಾರು ಮೂವತ್ತು ವರ್ಷಗಳಿಂದ ರಂಗಭೂಮಿಯಲ್ಲಿರುವ ಪ್ರಸನ್ನ ಕಳೆದ ವರ್ಷ 'ದೇಸಿ ಜೀವನ ಪದ್ಧತಿ' ಎಂಬ ಪುಸ್ತಕ ಬರೆದಿದ್ದರು. ವ್ಯಕ್ತಿತ್ವ ವಿಕಸನ, ಆಧ್ಯಾತ್ಮ, ಧ್ಯಾನ, ಸುಮ್ಮನೆ ಇರುವುದು ಇತ್ಯಾದಿಯನ್ನು ಕೊಂಚ ಅದಲುಬದಲು ಮಾಡಿ ಉಣಬಡಿಸುತ್ತಲೇ ಇರುವ ಗುರುಗಡಣದ ಮಾತು ಕೇಳುವ ಜತೆಗೆ ನಾವೊಮ್ಮೆ ಪ್ರಸನ್ನರ ಪುಸ್ತಕ ಓದಬೇಕು.
ಸರಳ ಕನ್ನಡದಲ್ಲಿ ಸ್ಪಷ್ಟವಾಗಿ , ನಿಖರವಾಗಿ ಬರೆಯುವ ಪ್ರಸನ್ನ , ಈಗ 'ನಟನೆಯ ಪಾಠಗಳು' ಎಂಬ ಹೊಸ ಪುಸ್ತಕ ತಂದಿದ್ದಾರೆ. (ಕರ್ನಾಟಕ ಪುಸ್ತಕ ಪ್ರಾಧಿಕಾರ ಪ್ರಕಟಿಸಿರುವ ೩೫೦ ಪುಟಗಳ ಪುಸ್ತಕದ ಬೆಲೆ ರೂ. ೧೫೦) ಹವ್ಯಾಸಿ ನಟರು, ವೃತ್ತಿಪರ ನಟರು, ಟೆಲಿವಿಷನ್ ಹಾಗೂ ಸಿನಿಮಾ ನಟರು, ನಟರಲ್ಲದಿದ್ದರೂ ಸಂವಹನ ತರಬೇತಿಯನ್ನು ಬಯಸುವ ಎಲ್ಲರಿಗೆ ನಟನೆಯ ಕೈಪಿಡಿಯಿದು ಅಂತ ಹೇಳಿಕೊಂಡಿದ್ದಾರೆ. (ಅಂದರೆ ಯಾವುದೇ ರೀತಿಯ ಸಂವಹನಕ್ಕೆ ನಟನೆ ಅಗತ್ಯ ಅಂತ ಹೇಳುತ್ತಿದ್ದಾರೆ ! ಅವರೇ ಬರೆದಂತೆ 'ಸುಳ್ಳು ಥಟ್ಟನೆ ತಿಳಿದುಬಿಡುತ್ತದೆ, ಆದರೆ ಸತ್ಯ ಥಟ್ಟನೆ ತಿಳಿಯುವುದಿಲ್ಲ ! ')
ಕನ್ನಡದಲ್ಲಿ ಇಂತಹ ಪುಸ್ತಕ ಬಂದಿರುವುದು ಇದೇ ಮೊದಲು. ನಾಟಕದ ಫೋಟೊ-ಚಿತ್ರ ಸಹಿತವಾದ ಈ ಪುಸ್ತಕ ನಟನೆಯ ಮೂಲ ಪಾಠಗಳನ್ನು ಅತ್ಯಂತ ಪ್ರಾಕ್ಟಿಕಲ್ ಆಗಿ ಹೇಳುತ್ತದೆ. ರೂಪಕ-ಉಪಮೆಗಳಿಂದ ಕಿಕ್ಕಿರಿದು, ತೀರಾ ರಮ್ಯವಾಗಿ, ಕೊಂಚ ಗೊಂದಲಕ್ಕೆ ದೂಡಿ ಬರೆಯುವುದನ್ನೇ ಅಭ್ಯಾಸ ಮಾಡಿಕೊಂಡವರು ಸರಳವಾಗಿದ್ದೂ ಓದಿಸಿಕೊಂಡು ಹೋಗುವ ಈ ಎರಡು ಪುಸ್ತಕಗಳನ್ನು ಪರಾಂಬರಿಸಬೇಕು. ( ಉದಯವಾಣಿ ಅಂಕಣಕಾರರಾದ ಅಬ್ದುಲ್ ರಶೀದ್, ಶ್ರೀಧರ ಬಳಗಾರರು -ಅತಿರಮ್ಯತೆ ಬಿಟ್ಟು ಕೊಂಚ ರಿಲಾಕ್ಸ್ ಆಗಬೇಕೆಂದು ಈ ಸಂದರ್ಭದಲ್ಲಿ ಪ್ರಾರ್ಥಿಸುತ್ತೇವೆ ! ) 'ಸತ್ಯ ಮತ್ತು ವಾಸ್ತವಗಳ ನಡುವಿನ ವ್ಯತ್ಯಾಸ ಅರಿಯುವ ಪ್ರಯತ್ನ ಮಾಡುತ್ತದೆ ರಂಗಭೂಮಿ' ಎನ್ನುತ್ತಾರೆ ಪ್ರಸನ್ನ. ಬಹುಶಃ ಇದು ಎಲ್ಲ ಕಲೆಗಳ ಸಂದರ್ಭದಲ್ಲೂ ನಿಜವಿರಬೇಕು. ನಟನೆ ಮಾಡುವುದರಲ್ಲಿ ಅಥವಾ ನೋಡುವುದರಲ್ಲಿ ಆಸಕ್ತಿ ಇದ್ದರೆ ನಟನೆಯ ಪಾಠಗಳು' ಓದಿ.